ಬೊಂಬಾಯಿ ಬಾಯಿಬಡುಕಿಯರು ಈ ಕಿರಗೂರಿನ ಗಯ್ಯಾಳಿಗಳು

Tags

, , , ,

ಕುವೆಂಪುರವರು ಕನ್ನಡ ಸಾರಸ್ವತ ಲೋಕದ ಮೇರು ಶಿಖರ. ತಂದೆಯ ನೆರಳಿನಿಂದ ಆಚೆ ಬಂದು ತಮ್ಮದೇ ಆದ ಛಾಪನ್ನು ಮೂಡಿಸಿದವರು ಅವರ ಮಗ ಪೂರ್ಣಚಂದ್ರ ತೇಜಸ್ವಿ. ತಮ್ಮ ಸರಳವಾದ ನಿರೂಪಣೆ ಶೈಲಿಯಿಂದ ಓದುಗರಿಗ ಹತ್ತಿರವಾದವರು. ಅವರ ಕೃತಿಗಳು ತಿಳಿ ಹಾಸ್ಯದಿಂದ ಸಮಾಜದಲ್ಲಿ ನೆಲೆನಿಂತ ಮೌಢ್ಯಗಳು, ಅವುಗಳಿಂದ ಮನುಷ್ಯರಾದ ನಮಗೆ ಎಳ್ಳಷ್ಟೂ ಉಪಯೋಗವಿಲ್ಲವೆಂದು ಸಾರಿ ಹೇಳುತ್ತವೆ.ಅಂತಹದ್ದೇ ಒಂದು ಕಾದಂಬರಿ ಕಿರಗೂರಿನ ಗಯ್ಯಾಳಿಗಳು.

Tejaswi

ಇಂತಹ ಕಾದಂಬರಿಯನ್ನು ಸಿನಿಮಾ ಮಾಡುವುದು ಒಂದು ಸಾಧನೆಯೇ ಸಾರಿ. ಈ ಕಾರಣಕ್ಕೆ ಸುಮನ ಕಿತ್ತೂರು ನಿರ್ದೇಶನದ “ಕಿರಗೂರಿನ ಗಯ್ಯಾಳಿಗಳು” ಚಲನಚಿತ್ರ ಕನ್ನಡ ಸಿನಿಮಾ ಇತಿಹಾದಲ್ಲಿ ಒಂದು ವಿಶೇಷ ಪ್ರಯತ್ನವೆನ್ನಬಹುದು.ಮತ್ತು ಈ ಪ್ರಯತ್ನದಲ್ಲಿ ನಿರ್ದೇಶಕಿ ಯಶಸ್ವಿಯಾಗಿದ್ದಾರೆ ಕೂಡ.

KG

ಎಲ್ಲಾ ಜಾತಿಯವರು ಸಮಾಜದಲ್ಲಿ ತಮ್ಮ ತಮ್ಮ ಭೂಮಿಕೆಗಳನ್ನು ಅರಿತುಕೊಂಡು ಇತರ ಜಾತಿಯವರೊಡನೆ ಸಹಬಾಳ್ವೆಯಿಂದ ಜೀವನ ನಡೆಸುತ್ತಿದ್ದ ಊರು ಕಿರಗೂರು. ಆ ಗ್ರಾಮದಲ್ಲೊಂದು ಹೆಂಗಸರ ಗ್ಯಾಂಗು. ಗೌಡರ ಜಾತಿ ಸುಬ್ಬನ ಹೆಂಡತಿ ದಾನಮ್ಮ ಆ ಗುಂಪಿನ ಅಘೋಷಿತ ನಾಯಕಿ. ದಲಿತರ ಜಾತಿಯ ರುದ್ರಿ ಮತ್ತು ಕಾಳಿ ಗಯ್ಯಾಳಿಗಳು ಎಂಬ ಬಿರುದಿಗೆ ಅನ್ವರ್ಥನಾಮನೆಂಬಂತೆ ಇದ್ದವರು. ಕಾಳೇಗೌಡನ ಹೆಂಡತಿ ನಾಗಮ್ಮನಿಗೆ ಮದುವೆಯಾಗಿ ಸುಮಾರು ವರ್ಷ ಕಳೆದರೂ ಮಗುವಾಗಿಲ್ಲವೆಂಬ ಕೊರಗು.

ದಾನಮ್ಮನ ದೆಸೆಯಿಂದ ಊರಿನ ಹೆಂಗಸರು ಗಯ್ಯಾಳಿಗಳಾದ್ದದ್ದು ಎಂಬ ಸಣ್ಣ ಅಸಮಧಾನ ಊರಿನ ಗಂಡಸರಲ್ಲಿ ಮನೆಮಾಡಿತ್ತು. ಊರಿನ ಪಂಡಿತನಿಗೆ ಬ್ಯುಸಿನೆಸ್ಸು ಕಡಿಮೆಯಾಯಿತೆಂದು ಕಿರಗೂರಿನ ಗ್ರಾಮಸೇವಕ ಶಂಕ್ರಪ್ಪನ ಜೊತೆ ಸೇರಿ ಊರಿನ ಶಾಂತಿ ಹಾಳುಮಾಡಲು ದಲಿತರು ಮತ್ತು ಗೌಡರನ್ನು ಒಬ್ಬರ ಮೇಲೊಬ್ಬರನ್ನು ಎತ್ತಿ ಕಟ್ಟುತ್ತಾರೆ. ಈ ಕುತಂತ್ರದಿಂದಾಗಿ ಗೌಡರುಗಳಿಗೆ ಜಾತಿ ನಿಂದನೆಯ ಸುಳ್ಳು ಆರೋಪದಿಂದ ಪೋಲೀಸ್ ಠಾಣೆಯ ಆತಿಥ್ಯ ಅನುಭವಿಸಬೇಕಾದ ದುರ್ದೈವ. ಅವಮಾನದಿಂದ ನೊಂದು ಮರ ಕಡಿಯುವ ಕೆಲಸದಿಂದ ದಲಿತರನ್ನು ಬಿಡಿಸಿ ತಾವೇ ಕಡಿಯುತ್ತೇವೆಂದು ಹೊರಟ ಗೌಡರುಗಳು ಸೊಂಟ ಉಳುಕಿಸಿಕೊಂಡು ಹಾಸಿಗೆ ಹಿಡಿಯುತ್ತಾರೆ.

ಉಳುಕು ತೆಗೆಯುವುದು ಗೊತ್ತಿದ್ದದ್ದು ದಲಿತರ ಕರಿಯನಿಗೆ ಮಾತ್ರ. ದಲಿತರ ಬಳಿ ಹೋಗಬೇಕೆಂದು ಏನೇನೋ ಮಾಡಿದರೂ ನೋವು ಕಡಿಮೆಯಾಗದೇ ಇದ್ದಾಗ ಪಂಡಿತನನ್ನು ಕರೆಸುತ್ತಾರೆ. ಕಾಳೇಗೌಡನ ಹೆಂಡತಿ ನಾಗಮ್ಮ ಆ ಪಂಡಿತನೊಂದಿಗೆ ಓಡಿಹೋಗುತ್ತಾಳೆ. ನಂತರ ಮರಳಿ ಬರುತ್ತಾಳೆ.

ಆಮೇಲೇನಾಯ್ತೆಂದು ಚಿತ್ರಮಂದಿರದಲ್ಲಿ ನೋಡಿ.

ನಿರ್ದೇಶಕಿಯಾಗಿ ಸುಮನ ಕಿತ್ತೂರು ಗೆದ್ದಿದ್ದಾರೆ. ಕನ್ನಡದಲ್ಲಿ ಒಳ್ಳೆಯ ಚಿತ್ರಗಳು ಬರುವುದಿಲ್ಲವೆಂದು ಮೂಗು ಮುರಿಯುತ್ತಿದ್ದ ಪ್ರೇಕ್ಷಕರಿಗೆ ಒಂದು ಚಂದದ ಸಿನಿಮಾ ನೀಡಿದ್ದಾರೆ. ಅವರ ನಿರ್ದೇಶನದ ಪರಿಣಿತಿ ಕಾಣಿಸುವುದು ಪಾತ್ರಗಳಿಗೆ ನಟರ ಆಯ್ಕೆಯಲ್ಲಿ. ಕಾಳೇಗೌಡನ ಪಾತ್ರವನ್ನು ಕಿಶೋರ್ ಅಲ್ಲದೇ ಮತ್ಯಾರೇ ಮಾಡಿದರೂ “ಮಿಶ್ಟಿಕ್” ಆಗಿ ಬಿಡುತ್ತಿತ್ತು. ಹಾಗೆಯೇ ಶಂಕ್ರಪ್ಪನ ಪಾತ್ರವನ್ನು ಅಚ್ಯುತ್ ಕುಮಾರ್ ಅವರಲ್ಲದೇ ಇನ್ಯಾರೇ ಮಾಡಿದರೂ ಅವರಷ್ಟು ಅಚ್ಚುಕಟ್ಟಾಗಿ ಮಾಡಲಾಗುತ್ತಿರಲಿಲ್ಲ.ಪೋಲೀಸ್ ಪೇದೆಯಾಗಿ ಮಂಡ್ಯ ರಮೇಶ್, ಆಫೀಸರಾಗಿ ಪ್ರಕಾಶ್ ಬೆಳವಾಡಿ, ಮತ್ತು ಕರಿಯನ ತಾಯಿಯಾಗಿ ಗಿರಿಜಾ ಲೋಕೇಶ್ ಗಮನ ಸೆಳೆಯುತ್ತಾರೆ.

ದಾನಮ್ಮನ ಪಾತ್ರದಲ್ಲಿ ಶ್ವೇತಾ ಶ್ರೀವಾತ್ಸವ್ ಅವರ ಅಭಿನಯ ಅಷ್ಟೇನೂ ತೀವ್ರವಾಗಿಲ್ಲದೇ ಇರುವುದು ಸಿನಿಮಾದ ಕೆಲವೇ ಕೆಲವು ನ್ಯೂನತೆಗಳಲ್ಲಿ ಒಂದು. ಕಾಳಿ ಮತ್ತು ರುದ್ರಿಯ ಜಗಳ ಸಿನಿಮಾದ ಹೈಲೈಟ್. ಸಾಧು ಕೋಕಿಲ ಅವರು ಕತೆಗೆ ತಕ್ಕಂತೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಸೋನಪ್ಪನಾಗಿ ಲೂಸ್ ಮಾದ ಯೋಗೀಶ್ ಅಚ್ಚುಕಟ್ಟಾಗಿ ಅಭಿನಯಸಿದ್ದಾರೆ.

ಒಂದು ಪರಿಪೂರ್ಣ ಸಿನಿಮಾ ನೀಡಬೇಕೆಂಬ ಹಂಬಲದಿಂದ ತಾವೇ ಕಲಾ ವಿಭಾಗವನ್ನು ನಿಭಾಯಿಸಿದ್ದು ಸುಮನ ಅವರು ಮಾಡಿದ ಸಣ್ಣ ತಪ್ಪು. ಮತ್ತು ಇದರಲ್ಲಿ ಛಾಯಾಗ್ರಾಹಕನ “ಮಿಶ್ಟೀಕು” ಎದ್ದು ಕಾಣುತ್ತದೆ. ಆಗಿನ ಕಾಲಕ್ಕೆ ತಕ್ಕಂತೆ ಫ್ರೇಮ್ ಗಳನ್ನು ತೋರಿಸಿದ್ದರೆ ಚಿತ್ರ ಇನ್ನೂ ಚೆನ್ನಾಗಿ ಮೂಡಿಬರುತ್ತಿತ್ತು. ಸೆನ್ಸಾರ್ ಮಂಡಳಿಯಿಂದಾಗಿ ಕೆಲವು ಬೈಗುಳಗಳು ಬೀಪ್ ಆಗಿದ್ದು ನಿರಾಸೆಯ ಸಂಗತಿ.

ಅಂತಿಮವಾಗಿ ಅಣ್ಣ (ಪೂರ್ಣಚಂದ್ರ ತೇಜಸ್ವಿಯವರು) ಬದುಕಿದ್ದಿದ್ದರೆ ಸುಮನ ಕಿತ್ತೂರು ಮತ್ತವರ ತಂಡದ ಪ್ರಾಮಾಣಿಕ ಪ್ರಯತ್ಮವನ್ನು ಕಂಡು ಖಂಡಿತವಾಗಿ ಹೆಮ್ಮೆ ಪಡುತ್ತಿದ್ದರು.

ಈ ಸಿನಿಮಾ ಮಾಡಿದ್ದಕ್ಕಾಗಿ ಕಿರಗೂರಿನ ಗಯ್ಯಾಳಿಗಳು ತಂಡಕ್ಕೆ ಧನ್ಯವಾದಗಳು. ಇನ್ನೂ ಹೆಚ್ಚು ಹೆಚ್ಚು ಒಳ್ಳೆಯ ಸಿನಿಮಾಗಳು ಕನ್ನಡದಲ್ಲಿ ಮುಂದಿನ ದಿನಗಳಲ್ಲಿ ಬರುವಂತಾಗಲಿ. ಮನೆಯವರೆಲ್ಲ ಚಿತ್ರಮಂದಿರಗಳಿಗೆ ಹೋಗಿ ಕಿರಗೂರಿನ ಗಯ್ಯಾಳಿಗಳನ್ನು ಗೆಲ್ಲಿಸಬೇಕೆಂದು ಈ ಮೂಲಕ ಕೇಳಿಕೊಳ್ಳುತ್ತೇನೆ.

ನನ್ನ ರೇಟಿಂಗ್ : ೪/೫