Tags

,

1.

ಅವನು ಅವಳಿಗಾಗಿ ದಿನ ಒಂದು ಪತ್ರ ಬರೆಯುತ್ತಿದ್ದ . ಇಂದೇಕೋ ಅವನ ಪತ್ರ ಬಂದಿಲ್ಲ. ಇವಳಿಗೆ ಚಿಂತೆ. ನನ್ನನ್ನು ನೋಡದೆಯೂ ಇಷ್ಟು ಪ್ರೀತಿಸಿದವನು ಇದ್ದಕ್ಕಿದ್ದಂತೆ ಎಲ್ಲಿ ಮಾಯವಾದನು? ಕೆಲವು ದಿನಗಳ ನಂತರ ತಿಳಿಯಿತು ಅವನು ಕ್ಯಾನ್ಸರ್ ನಿಂದ ಇಹ ಲೋಕ ತ್ಯಜಿಸಿದನೆಂದು. ಈಗ ದಿನವೂ ಅವನ ಸಮಾಧಿಯ ಮೇಲೆ ಗುಲಾಬಿಯೊಂದನು ಇಡುತ್ತಿದ್ದಾಳೆ .

2.

ಗುಡಿಸಿಲಿನಂತಹ ಮನೆಯ ಮುಂದೆ ಜನಸಂದಣಿ ಹೆಚ್ಚಿತ್ತು. ಏನೋ ಕುತೂಹಲ. ಆ ಮನೆಯ ಮಗನ ಬಗ್ಗೆ ಕೆಲವರು ಏನೋ ಮಾತನಾಡಿಕೊಳ್ಳುತ್ತಿದ್ದರು. ದೂರದಲ್ಲೆಲ್ಲೋ ಕೆಂಪು ದೀಪದ ಕಾರೊಂದು ಇತ್ತ ಕಡೆಯೇ ಬರುತ್ತಿತ್ತು. ಜನ ಕಾರಿಗೆ ದಾರಿ ನೀಡುತ ಪಕ್ಕಕ್ಕೆ ಸರಿದರು. ಕಾರಿನಿಂದ ಇಳಿದವ ಸೀದಾ ಆ ಮನೆಯ ಬಾಗಿಲ ಮುಂದೆ ನಿಂತು ಕರೆದ. “ಅಮ್ಮಾ! ನಿನ್ನ ಮಗ ಬಂದಿದೀನಿ. ನೀ ಅಂದುಕೊಂಡಂತೆ ಜಿಲ್ಲಾಧಿಕಾರಿಯಾಗಿದ್ದೇನೆ”. ಬಾಗಿಲು ತೆರೆದ ಆ ಮನೆಯ ಯಜಮಾನಿ ಕಂಕುಳಲ್ಲಿ ಗಂಟೊಂದನು ಹಿಡಿದುಕೊಂಡು ಮಗನನ್ನು ಹಿಂಬಾಲಿಸಿ ಕಾರು ಹತ್ತಿದಳು.ಬಂದ ದಾರಿಯಲ್ಲೇ ಸದ್ದು ಮಾಡುತ್ತ ಕಾರು ಮರೆಯಾಯಿತು. ಜನ ಕಣ್ಣು ಬಿಟ್ಟುಕೊಂಡು ಸ್ವಲ್ಪ ಹೊತ್ತು ನೋಡಿ ಪೊರಕೆ ಇತ್ಯಾದಿಗಳನ್ನು ಹಿಡಿದು ತಮ್ಮ ತಮ್ಮ ಕೆಲಸಕ್ಕೆ ಹೊರಟರು.

3.
ಆಚೆ ಮೆಲ್ಲಗೆ ಮಳೆ ಹನಿಯುತ್ತಿತ್ತು. ಅವಳ ಮುಂಗುರುಳ ಅಮಲಿನಲ್ಲಿ ಆತ ಸಿಗರೇಟು ಸೇದುತ್ತಿದ್ದ. ಎದೆಯ ಮೇಲೆ ಯಾರಿಗೂ ಕಾಣದ ಜಾಗದಲ್ಲಿ ಅವಳ ಹೆಸರು ಮುಗುಳ್ನಗುತ್ತಿತ್ತು. ಎದ್ದ. ಬಿಟ್ಟು ಹೋದವಳ ಮರೆಯಲು ಬಾರಿನೆಡೆಗೆ ನಡೆದ. ಏನೋ ಸದ್ದಾಯಿತು. ಬಹುಶ:ಆವಳ ಭೇಟಿಗೆ ಕಾಲಕೂಡಿಬಂದಿತ್ತು. ಮುಖದಲ್ಲಿ ಮಂದಹಾಸವಿತ್ತು. ಸುತ್ತಲೂ ರಕ್ತದ ಹೊಳೆ.
 
4.
ಅವನು ಮತ್ತು ಅವಳು ಶಾಲೆಯಲ್ಲಿದ್ದಾಗಲಿಂದ ಪ್ರೀತಿಸುತಿದ್ದರು. ಮದುವೆಯ ಕನಸು ಕಂಡರು. ಮುಂದೊಂದು ದಿನ ಮದುವೆಯೂ ಆದರು. ಅವನು ಬೇರೊಬ್ಬಳನ್ನು. ಇವಳು ಇನ್ನೊಬ್ಬನನ್ನು. ಕಾರಣ ಜಾತಿಯಂತೆ.
 
5.

ತಲೆಯ ಮೇಲಿದ್ದ ಮಲ್ಲಿಗೆಯ ಕಂಪು ಸುತ್ತಲೂ ಹರಡಿತ್ತು. ಗಾಢವಾದ ಕೆಂಪು ಬಣ್ಣದ ಲಿಪ್ ಸ್ಟಿಕ್ ತುಸು ಹೆಚ್ಚಾಗಿಯೇ ಎದ್ದು ಕಾಣುತ್ತಿತ್ತು. ಸೀರೆಯ ಸೆರಗನ್ನು ಅತ್ತಿಂದಿತ್ತ ಅಲುಗಾಡಿಸುತ್ತ ಮೆಜೆಸ್ಟಿಕ್ ನ ಕೆಳ ಸೇತುವೆಯಲ್ಲಿ ಗಿರಾಕಿಗಳಿಗೆ ಕಾಯುತ್ತ ಮಾದಕ ನೋಟ ಬೀರುತ್ತಾ ನಿಂತಿದ್ದಳು ಅವಳು.ಕೆಲವರು ಆಕೆಯನ್ನು ಯಾವುದೋ ಅನ್ಯ ಗ್ರಹದ ಜೀವಿಯಂತೆ ಕಂಡರು. ಕೆಲವರು ಭೋಗದ ವಸ್ತುವಿನಂತೆ.

ಅಲ್ಲೇ ಆಕೆಯ ಮುಂದೆ ಒಂದು ಜೋಡಿ ಹಾದುಹೋಯ್ತು. ಹೆಂಡತಿ ಗಂಡನ ಕೈಯನ್ನು ಭದ್ರವಾಗಿ ಹಿಡಿದಿದ್ದಳು. ಇನ್ನೊಂದು ಕೈಯಲ್ಲಿ ಮೊಬೈಲ್ ಬೆಳಕು ಸೂಸುತ್ತಿತ್ತು. ಇನ್ ಬಾಕ್ಸ್ ನಲ್ಲಿ ಅವಳ ಬಾಯ್ ಫ್ರೆಂಡಿನ ಮೆಸೇಜ್ ಬಂದು ಕುಳಿತಿತ್ತು. ಆದರೆ ಅವಳನ್ಯಾರೂ ಗಮನಿಸಲೇ ಇಲ್ಲ.

Advertisements