Tags

, , , , , , ,

ಇಂಗ್ಲೀಷಿನಲ್ಲಿ ಒಂದು ಮಾತಿದೆ ” Great people talk about ideas. Mean ppl talk about other ppl” ಈ ಸಾಲಿನ ಮೇಲೆ ನನಗೆ ಭಾರಿ ನಂಬಿಕೆಯಿತ್ತು. ನಿನ್ನೆಯವರೆಗೆ. ಅವನನ್ನು ಭೇಟಿ ಮಾಡಿದ ಮರುದಿನ ಅಂದರೆ ಇವತ್ತಿನಿಂದ ಕೆಲವೊಮ್ಮೆ ಕೆಲವು ದೊಡ್ಡ ಸಾಲುಗಳು ಕೂಡ ಬಾಲಿಶವೆನಿಸಿಬಿಡುತ್ತಿವೆ. ಇವತ್ತು ನನ್ನ ಸಿಧ್ಧಾಂತಗಳಿಗೆ ತಿಲಾಂಜಲಿ ನೀಡಿ ಒಬ್ಬ ವ್ಯಕ್ತಿಯ ಬಗ್ಗೆ ಬರೆಯುತ್ತಿದೇನೆ. ಪೂರ್ತಿ ಓದುವುದನ್ನು ಮರೆಯಬೇಡಿ.

ಅವನ ಹೆಸರು ರಮೇಶ(ಹೆಸರು ಬದಲಾಯಿಸಲಾಗಿದೆ). ನನ್ನ ಅವನ ಭೇಟಿಯಾಗಿದ್ದು ಈಗ್ಗೆ ಒಂದು ತಿಂಗಳ ಹಿಂದೆ ಅಂದರೆ ಏಪ್ರಿಲ್ ನಲ್ಲಿ. ಫೇಸ್ಬುಕ್ಕಿನಲ್ಲಿ ಹಾಗೇ ಸುಮ್ಮನೆ ಗೆಳೆಯನ ಸ್ಟೇಟಸ್ ನೋಡುವಾಗ ಅವನಿಂದ ಗೆಳೆತನದ ಕೋರಿಕೆ ಬಂತು. ಪೂರ್ತಿ ವಿವರಗಳಿಲ್ಲದ ಕಾರಣ ಅದರ ಬಗ್ಗೆ ಅಷ್ಟಾಗಿ ತಲೆ ಕೆಡಿಸಿಕೊಳ್ಳಲು ಹೋಗಲಿಲ್ಲ. ಅದೊಂದು ದಿನ ಅಚಾನಕ್ಕಾಗಿ ಅವನಿಂದ ಒಂದು ಚಾಟ್ ಸಂದೇಶ ಬಂದಿತ್ತು. ಸ್ವಲ್ಪ ದಿನದ ನಂತರ ನೋಡಿದಾಗ ತಿಳಿದಿದ್ದು ಅವನು ನನ್ನನ್ನು ಭೇಟಿ ಮಾಡಲು ಬಯಸಿದ್ದನೆಂದು. ಸುಮಾರು ಹೊತ್ತು ಯೋಚಿಸಿದ ನಂತರ ಅವನಿಗೆ ನಾನೊಂದು ಸಂದೇಶ ಕಳಿಸಲು ಕೀ ಬೋರ್ಡ್ ನ ಕೀಗಳನ್ನು ಒತ್ತುತ್ತಿದ್ದಾಗ ಯಾವತ್ತೂ ಕರೆ ಮಾಡದ ಗೆಳೆಯನೊಬ್ಬನ ಕರೆ ಬಂತು. ಬಹಳ ದಿನದ ನಂತರ ಹಳೆಯ ಗೆಳೆಯನೊಡನೆ ಮಾತನಾಡುತ್ತಾ ಸಮಯ ಹೋದದ್ದೇ ತಿಳಿಯಲಿಲ್ಲ. ರಾತ್ರಿ ಹತ್ತು ಗಂಟೆಯಾಗಿತ್ತು. ನನ್ನ ಜಂಗಮವಾಣಿಗೆ ಫೇಸ್ಬುಕ್ಕಿನಿಂದ ಒಂದು ಸಂದೇಶ ಅವನಿಂದ ಬಂದಿತ್ತು. ತನ್ನ ದೂರವಾಣಿ ಸಂಖ್ಯೆಯನ್ನು ನೀಡಿದ್ದ ಅವನು ಒಂದು ವಾರದೊಳಗೆ ಕರೆ ಮಾಡುವಂತೆ ಕೋರಿದ್ದ. ಇಲ್ಲಾ! ಆಜ್ಞಾಪಿಸಿದ್ದ. ಇವನ್ಯಾವನಪ್ಪ ಹೀಗೆ ಬೇತಾಳನಂತೆ ನನ್ನ ಹಿಂದೆ ಬಿದಿದ್ದಾನೆ ಅಂತ ಯೋಚಿಸುತ್ತಾ ನಿದ್ದೆಗೆ ಸರಿದೆ.

ದಿನಗಳು ಉರುಳಿದಂತೆ ಅವನಿಂದ ಬರುತ್ತಿದ್ದ ಮೆಸೇಜಿನ ಸಂಖ್ಯೆ ಹೆಚ್ಚುತ್ತಾ ಹೋಯಿತು. ನನ್ನ ಸಹನೆಯ ಕಟ್ಟೆ ಒಡೆದು, ಸ್ವಲ್ಪ ಕೋಪದಿಂದ ಮೆಸೇಜ್ ಮಾಡಬೇಡಿ ಅಂದದ್ದು ಆಯಿತು. ಆದರೆ ಅವನದು ಒಂದೇ ವರಾತ. ಒಂದೇ ಒಂದು ಸಲ ಭೇಟಿ ಮಾಡಿ, ಆಮೇಲೆ ನನ್ನಿಂದ ನಿಮಗೆ ಯಾವುದೇ ತೊಂದರೆ ಇರುವುದಿಲ್ಲ ಎಂಬ ಆಶ್ವಾಸನೆ ಬೇರೆ. ಹಾಳಾದ ಮನಸ್ಸು ಹುಡುಗಿ ಕರೆದಿದ್ರೆ ಥಟ್ ಅಂತ ನಿರ್ಧರಿಸಿ ಬಿಡುತ್ತಿತ್ತೇನೋ. ಯಾಕೋ ಎಲ್ಲವನ್ನೂ ಅನುಮಾನದಲ್ಲೇ ನೋಡುತ್ತಿತ್ತು. ಯಾರು ಏನು ಎತ್ತ ಅಂತ ಗೊತ್ತಿಲ್ಲ. ಅವನು ಕರೆದ ಅಂತ ಭೇಟಿ ಮಾಡಲು ಹೋಗಿ ಏನಾದ್ರೂ ಎಡವಟ್ಟಾದ್ರೆ ಅನ್ನೋ ಭಯ. ಅದೇನು ಹೇಳಬೇಕು ಅಂತ ಫೋನಲ್ಲೇ ಹೇಳಪ್ಪಾ ಅಂದ್ರೆ, “ಇಲ್ಲಾ ಸರ್, ಫೋನಲ್ಲಿ ಹೇಳೋಕೆ ಆಗಲ್ಲ. ನನ್ನ ಮೇಲೆ ನಂಬಿಕೆ ಇಲ್ಲ ಅಂದರೆ ನಿಮ್ಮನೆ ಅಡ್ರೆಸ್ ಕೊಡಿ. ನಾನೇ ಬರ್ತೀನಿ. ಅಲ್ಲೇ ಮಾತನಾಡಬಹುದಲ್ವೇ?” ಅಂತ ಮರು ಪ್ರಶ್ನೆ ಹಾಕಿದ್ದ. ನಾಳೆ ತಿಳಿಸುತ್ತೇನೆಂದು, ಮತ್ತೆ ಮೆಸೇಜ್ ಮಾಡದಿರಲು ಹೇಳಿದೆ.

ಜೀವನದ ಅತ್ಯಮೂಲ್ಯವಾದ ಭೇಟಿಗೆ ವೇದಿಕೆ ಸಜ್ಜಾಗಿತ್ತು. ಆದರೆ ನನಗದು ತಿಳಿದಿರಲಿಲ್ಲ. ಅವನನ್ನು ಎಲ್ಲಿ ಭೇಟಿ ಮಾಡಬೇಕೆಂದು ತೋಚದೆ ಜಾಸ್ತಿ ಜನ ಜಂಗುಳಿಯಿರುವ ಮೈಸೂರಿನ ನಗರ ಬಸ್ ಸ್ಟ್ಯಾಂಡಿನಲ್ಲಿ ಭೇಟಿ ಮಾಡಲು ನಿರ್ಧರಿಸಿ ಅವನಿಗೆ ಮೆಸೇಜ್ ಮಾಡಿದೆ. ಮರುದಿನದ ಕುತೂಹಲಕ್ಕೆ ನಿದ್ದೆ ಬರಲಿಲ್ಲ. ಯಾರೋ ನನ್ನ ಹಳೆಯ ಗೆಳೆಯರು ಸೇರಿ ನನ್ನ ಗೋಳು ಹುಯ್ದುಕೊಳ್ಳಲು ಹೀಗೆ ಮಾಡುತ್ತಿದ್ದಾರೆಂದೇ ನನ್ನ ಮನಸ್ಸು ಎಣಿಸುತಿತ್ತು. ಹಾಗೇನಾದರೂ ಆದರೆ ಅವರ ಹುಚ್ಚಾಟಕ್ಕೆ ಸರಿಯಾಗಿ ಶಾಸ್ತಿ ಮಾಡಿಯೇ ತೀರುತ್ತೇನೆಂದು ಶಪಥ ಮಾಡಿದ್ದೆ.

ಮರುದಿನ ಬೆಳ್ಳಂಬೆಳಗ್ಗೆಯೇ ಮೆಸೇಜ್ ಮಾಡಿದ್ದ. “ಸರ್! ಸಾಯಂಕಾಲ ಸರಿಯಾಗಿ ೪ ಗಂಟೆಗೆ ಬನ್ನಿ. ನಾನು ಸಮಯಕ್ಕೆ ಬಹಳ ಬೆಲೆ ಕೊಡುತ್ತೇನೆ. ಗುಡ್ ಮಾರ್ನಿಂಗ್” . ಅವನ ವಿನಮ್ರತೆಗೆ ಏನನ್ನೂ ಹೇಳಲಾಗದೆ ಸಂಜೆಯ ಆಗಮನಕ್ಕೆ ಕಾದು ದಿನದ ಎಲ್ಲಾ ಕೆಲಸ ಮುಗಿಸಿ ಅವನ ಭೇಟಿ ಮಾಡಲು ಹೊರಟೆ. ಭೇಟಿ ಮಾಡಬೇಕಿದ್ದ ಸ್ಥಳ ತಲುಪಿದೊಡನೆ ಕೈ ಗಡಿಯಾರ ನೋಡಿ ಸಮಾಧಾನವಾಯ್ತು. ಸಮಯ ೩.೪೫. url ಅವನು ಬರಲು ಕೇವಲ ಹದಿನೈದು ನಿಮಿಷಗಳಷ್ಟೇ ಇದ್ದಿದ್ದು. ಇಷ್ಟು ದಿನಗಳ ಕುತೂಹಲಕ್ಕೆ ಕೆಲವು ನಿಮಿಷಗಳಲ್ಲಿ ತೆರೆ ಬೀಳುವುದರಲ್ಲಿತ್ತು. ಅವನನ್ನು ಹುಡುಕುತ್ತಿದ್ದ ಕಣ್ಣುಗಳಿಗೆ ಮನಸ್ಸು “ನೀನು ಅವನನ್ನು ನೋಡಿಲ್ಲ. ಯಾಕಿಷ್ಟು ಅವಸರ” ಎಂದು ಸಮಾಧಾನದ ಮಾತುಗಳನ್ನಾಡುತಿತ್ತು. ಕೆಲವು ಸೆಕೆಂಡುಗಳಾಗಿರಬೇಕು ಯಾರೋ ಹಿಂದಿನಿಂದ ಮುಟ್ಟಿದಂತಾಯಿತು. ಹಿಂತಿರುಗಿದಾಗ ಕಂಡದ್ದು ಒಬ್ಬನೇ ವ್ಯಕ್ತಿಯ ಎರಡು ದೃಶ್ಯಗಳು. ನಗುವೆಂಬ ಸಾಗರವಿದ್ದ ಅವನ ಮುಖ ಹಾಗೂ……………………….!!!!!

TO BE CONTINUED

Advertisements