Tags

, , , ,

ಪ್ರತಿಬಾರಿ “ಮೇರಾ ಭಾರತ್ ಮಹಾನ್” ಅನ್ನಿಸಿದಾಗಲೆಲ್ಲಾ ನನಗೆ ಅದು ಸುಳ್ಳೆನಿಸುತ್ತದೆ ಮತ್ತು, ನಮ್ಮ ರಾಜಕೀಯ ಮತ್ತು ನ್ಯಾಯಾಂಗ ವ್ಯವಸ್ಥೆಯ ಮೇಲೆ ಅಸಹ್ಯ ಭಾವ ಮೂಡುತ್ತದೆ. ನೂರಾರು ಜನರನ್ನು ಬಲಿತೆಗೆದುಕೊಂಡ ಅಜ್ಮಲ್ ಕಸಬ್ , ಮತ್ತು ಭಾರತದ ಪ್ರಜಾಪ್ರಭುತ್ವದ ಸಂಕೇತವಾದ ಸಂಸತ್ತಿನ ಮೇಲೆ ದಾಳಿಯ ಪ್ರಮುಖ ರೂವಾರಿ ಅಫ್ಜಲ್ ಗುರುವಿನಂತಹ ಕೊಲೆಗಡುಕರು ಬಿರಿಯಾನಿ ತಿಂದು ಜೈಲಿನಲ್ಲೇ ಹಾಯಾಗಿ ಜೀವಂತವಾಗಿದ್ದರೆ, ನಮಗಾಗಿ ಪ್ರಾಣತೆತ್ತ ವೀರಯೋಧರ ಸಂಸಾರಗಳು ದಿನನಿತ್ಯ ಪರದಾಡುವ ಪರಿಸ್ಥಿತಿಯಲ್ಲಿ ದಿನ ಸಾಗಿಸುತ್ತಿದ್ದಾರೆ. ಇನ್ನೂ ಎಷ್ಟು ದಿನ ಇಂತಹ ದರಿದ್ರ ಆಡಳಿತವನ್ನು ಸಹಿಸಿಕೊಳ್ಳಲಾದೀತು ನಮ್ಮಿಂದ?. ವೋಟು ಹಾಕಿದ ತಪ್ಪಿನಿಂದಾಗಿ ನಮ್ಮ ದುರಾದೃಷ್ಟವನ್ನು ಹಳಿಯದೇ ನಮಗೆ ಇನ್ನಾವ ದಾರಿ ಇದೆ ಹೇಳಿ?. ದಿನ ರಾತ್ರಿಯಾದರೆ ರಾಷ್ಟ್ರೀಯ ವಾಹಿನಿಗಳಲ್ಲಿ ಬರುವ ಹೊಲಸು ರಾಜಕಾರಣದ ಸುದ್ದಿಯನ್ನು ನೋಡಿ ನೋಡಿ ವಾಕರಿಕೆ ಬಂದಂತಾಗಿ ಕೊನೆಗೆ ಹಾಸಿಗೆ ಹಿಡಿದು ಮಲಗುವುದಷ್ಟೇ ನಮ್ಮಿಂದ ಸಾಧ್ಯ. ಇನ್ನೊಂದೆಡೆ ನಮ್ಮಿಂದ ಚುನಾಯಿತರಾದ ರಾಜಕಾರಣಿಗಳು ಹಾಯಾಗಿ ತಮ್ಮ ಕಿಸೆಯನ್ನಂತೂ ಚೆನ್ನಾಗಿ ತುಂಬಿಸಿಕೊಳ್ಳುತ್ತಿದ್ದಾರೆ. ಇದಕ್ಕೆಲ್ಲಾ ಕಾರಣ ನಾವೇ!!. ದುಡ್ಡು ತಗೊಂಡು ವೋಟ್ ಹಾಕ್ತೀವಿ, ಅದಕ್ಕೆ ಅವರು , ತಾವು ಏನು ಮಾಡಿದರೂ ಜನ ಕೇಳೋದಿಲ್ಲ ಅಂತ ಆರಾಮಗಿರುತ್ತಾರೆ. ಧಿಕ್ಕಾರ ನಮಗೇ ಇರಲಿ.

ಅದು ಕೇರಳದ ಪುಟ್ಟ ನಗರ. ಅಲ್ಲಿ ಒಂದು ಪುಟ್ಟ ಮನೆ. ಮನೆಯ ಮುಂದೆ ನೂರಾರು ಜನರು ಸಾಲುಗಟ್ಟಿ ನಿಂತ ದೃಶ್ಯ. ಆ ಮನೆಯ ಹಿರಿಯನ ಕಣ್ಣಾಲಿಗಳು ತುಂಬಿದ್ದವು. ಬಾರದ ಲೋಕಕ್ಕೆ ಹೊರಟಹೋದ ಮಗನನ್ನು ನೆನೆದು ಆ ಜೀವ ಚಡಪಡಿಸುತಿತ್ತು. ಆದರೂ ಅದನ್ನೂ ತೋರಗೊಡದೇ ಅವರು ಹೇಳಿದ್ದು, ” ನಮ್ಮ ಮಗನನ್ನು ಕಳೆದುಕೊಂಡೆವೆಂಬ ದುಃಖ ಮನದಲ್ಲಿ ಸದಾ ಇರುತ್ತದೆ. ಆದರೆ, ಅವನು ದೇಶಕ್ಕಾಗಿ ತನ್ನ ಜೀವವನ್ನು ತ್ಯಾಗ ಮಾಡಿದನು ಅನ್ನೋ ಹೆಮ್ಮೆಯು ಚಿರಸ್ಥಾಯಿಯಾಗಿರುತ್ತದೆ”. ಆ ಹಿರಿಯರ ಹೆಸರು ವಿ.ರಾಮಕೃಷ್ಣನ್, ೬೦ ವಯಸ್ಸಿನ ಅವರಿಗೆ ಇದ್ದೊಬ್ಬ ಮಗ, ಲೆಫ್ಟಿನೆಂಟ್ ಕರ್ನಲ್ ವಿಶ್ವನಾಥನ್(೩೯) ದೇಶಕ್ಕಾಗಿ ಬಲಿಯಾದದ್ದು ಅವರಿಗೆ ಹೆಮ್ಮೆಯ ಸಂಗತಿಯಾಗಿತ್ತು. ಇಳಿವಯಸ್ಸಿನಲ್ಲಿ ಅವರಿಗೆ ಆಧಾರವಾಗಬೇಕಿದ್ದ ಮಗ , ಹೇಳದೇ ಮರೆಯಾದದ್ದು ಭರಿಸಲಾರದ ನಷ್ಟವಾಗಿತ್ತು. ಹಾಗೆಯೇ ಭಾರತಾಂಬೆಯು, ತನ್ನ ಧೀರಪುತ್ರನೊಬ್ಬನ್ನನ್ನು ಕಳೆದುಕೊಂಡ ನೋವಿನಲ್ಲಿದ್ದಳು. ತಾತನ ತೊಡೆಯ ಮೇಲೆ ಕುಳಿತು ದೂರದಿಂದ ನೋಡುತ್ತಿದ್ದ ಅಂಜಲಿ(ಲೆಫ್ಟಿನೆಂಟ್ ಕರ್ನಲ್ ವಿಶ್ವನಾಥನ್ ಮಗಳು)ಗೆ, ತನ್ನ ತಂದೆಯನ್ನು ಮತ್ತೆ ನೋಡಲಾಗುವುದಿಲ್ಲವೆಂಬ ಸತ್ಯಗೊತ್ತಿರಲಿಲ್ಲವಾದರೂ ಎಲ್ಲರೂ ಏನನ್ನೋ ಕಳೆದುಕೊಂಡಿದ್ದಾರೆಂಬ ದುಃಖದಲ್ಲಿದ್ದಾರೆ ಎಂದು ತಿಳಿದಿತ್ತು. ತನ್ನ ತಂದೆಯ ಸಾವನ್ನು ಅರ್ಥಮಾಡಿಕೊಳ್ಳಲು ಸಾಧ್ಯವೇ ಇಲ್ಲದ ವಯಸ್ಸಿನಲ್ಲಿದ್ದಳು ಅವಳು, “ತಾತ ಎಲ್ಲರೂ ಯಾಕೆ ಅಳ್ತಾ ಇದ್ದಾರೆ” ಅಂತ ಆಕೆ ಕೇಳಿದಾಗ ಯಾರ ಬಳಿಯೂ ಉತ್ತರವಿರಲಿಲ್ಲ.

ಲೆಫ್ಟಿನೆಂಟ್ ಕರ್ನಲ್ ವಿಶ್ವನಾಥನ್, ಕಾರ್ಗಿಲ್ ಯುಧ್ಧ ನಡೆಯದೇ ಹೋಗಿದ್ದರೆ, ತಮ್ಮ ಪತ್ನಿ ಮತ್ತು ಮಗಳನ್ನು ತಾವಿದ್ದ ಬೇಸ್ ಗೆ ಕರದೊಯ್ಯಲು ಜೂನ್ ನಾಲ್ಕನೇ ತಾರೀಖಿಗೆ ಕೊಚ್ಚಿಗೆ ಬರುವವರಿದ್ದರು. ಆದರೆ ವಿಧಿಯ ಆಟವೇ ಬೇರೆಯಿತ್ತು. ತಮ್ಮ ಎಲ್ಲಾ ಕನಸುಗಳನ್ನು ದೇಶಕ್ಕಾಗಿ ಮುಡಿಪಿಟ್ಟು ಕಾರ್ಗಿಲ್ ಯುಧ್ಧದಲ್ಲಿ ವೀರಮರಣವನ್ನಪ್ಪಿದರು. ಅವರ ತ್ಯಾಗ ಬಲಿದಾನಗಳಿಂದಾಗಿಯೇ ನಾವಿಂದು ನೆಮ್ಮದಿಯಾಗಿ ಉಸಿರಾಡಲು ಸಾಧ್ಯವಾಗಿರುವುದು. ಅವರಿಗೆ ನಮ್ಮೊದೊಂದು ಸಲಾಮ್ ಇರಲಿ. ಲೆಫ್ಟಿನೆಂಟ್ ಕರ್ನಲ್ ವಿಶ್ವನಾಥನ್, ತಮ್ಮ ಶೈಕ್ಷಣಿಕ ಜೀವನವನ್ನು ಹೆಚ್ಚು ಕಳೆದದ್ದು ಕೊಚ್ಚಿಯಲ್ಲಿ. ೧೯೮೧ ಇಸವಿಯಲ್ಲಿ ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯಲ್ಲಿ ತರಬೇತಿ ಪಡೆದ ನಂತರ ಅವರು ಭಾರತೀಯ ಸೇನೆ ಸೇರಿದರು. ಶ್ರೀಲಂಕಾಕ್ಕೆ ತೆರಳಿದ ಶಾಂತಿಪಾಲನಾ ಪಡೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದು ಮತ್ತು ಅಂಗೋಲಾದಲ್ಲಿ ಸಂಯುಕ್ತರಾಷ್ಟ್ರದ ಶಾಂತಿಪಾಲನಾ ಪಡೆಯಲ್ಲಿಯೂ ಭಾಗವಹಿಸಿದರು. ಅವರ ಸ್ನೇಹಿತ ಶ್ರೀಕುಮಾರ್ ಹೇಳುತ್ತಾರೆ, ” ಅವರು ದೇಶಕ್ಕಾಗಿ ಯಾವುದೇ ರಿಸ್ಕ್ ತೆಗೆದುಕೊಳ್ಳಲು ಸಿಧ್ಧರಾಗಿದ್ದರು”. ಲೆಫ್ಟಿನೆಂಟ್ ಕರ್ನಲ್ ವಿಶ್ವನಾಥನ್ ಅಸುನೀಗುವ ಕೆಲದಿನಗಳ ಅಂದರೆ ಜೂನ್ ೨ ರಂದು ತಮ್ಮ ಪತ್ನಿಗೆ ಒಂದು ಪತ್ರ ಬರೆಯುತ್ತಾರೆ. ಆದರೆ ಅದನ್ನು ಪೋಸ್ಟ್ ಮಾಡುವುದಿಲ್ಲ. ಕೊನೆಗೆ ಆ ಪತ್ರ ಅವರ ಪತ್ನಿಗೆ ತಲುಪಿದಾಗ, ಆ ಪತ್ರದೊಡನೆ ರಕ್ತಸಿಕ್ತವಾದ ಅವರ ದೇಹವೂ ಬಂದಿರುತ್ತೆ. ಆ ಪತ್ರದಲ್ಲಿದ್ದದ್ದೇನೆಂದರೆ, “ನಾನು ಗೊತ್ತಿಲ್ಲದ ಸ್ಥಳವೊಂದಕ್ಕೆ ಹೋಗುತ್ತಿದ್ದೇನೆ. ಅದು ಅಪಾಯಕಾರಿಯೂ ಆಗಿರಬಹುದು”. ಬಹುಶಃ ಗೊತ್ತಿಲ್ಲದ ಜಾಗವೆಂದರೆ ಸಾವು ಎಂದು ಅವರಿಗೆ ಅಂದು ತಿಳಿದಿರಲಿಲ್ಲವೆಂದೆನಿಸುತ್ತದೆ. ಜೂನ್ ಮೂರನೇ ತಾರೀಖಿನ ಮಧ್ಯಾಹ್ನ ದೂರವಾಣಿಯಲ್ಲಿ ಅವನ ಸಾವಿನ ಸುದ್ದಿ ತಲುಪಿತು ಎಂದು ಹೇಳುವಾಗ ವಿ.ರಾಮಕೃಷ್ಣನ್ ಅವರ ಕಣ್ಣು ತೇವವಾಗಿದ್ದವು. ಆದರೂ ಆ ಕಣ್ಣುಗಳಲ್ಲಿ ಅದಮ್ಯ ಹೆಮ್ಮೆಯೊಂದು ಕಾಣುತ್ತಿತ್ತು. ಅಲ್ಲಿಂದ ಅವರ ಜೀವನವೇ ಬದಲಾಯ್ತು. ಲೆಫ್ಟಿನೆಂಟ್ ಕರ್ನಲ್ ವಿಶ್ವನಾಥನ್ ಪತ್ನಿ ಜಲಜಾ, ಶ್ರಧ್ದಾಂಜಲಿ ಸಲ್ಲಿಸಲು ಬರುವ ಹಲವಾರು ಗಣ್ಯರ ಸಹಾಯವನ್ನು ಈಗಲೂ ನಿರಾಕರಿಸುತ್ತಾರೆ, ಮತ್ತು ಲೆಫ್ಟಿನೆಂಟ್ ಕರ್ನಲ್ ವಿಶ್ವನಾಥನ್ ತಂದೆ ವಿ.ರಾಮಕೃಷ್ಣನ್ , ಅವರ ಮನೆಗೆ ಬರುವವರಿಗೆಲ್ಲ ತಮ್ಮ ಮಗನ ಬಗ್ಗೆ ವಿವರಿಸುವುದರಲ್ಲಿ ಸಾರ್ಥಕತೆ ಕಾಣುತ್ತಿದ್ದಾರೆ. ಲೆಫ್ಟಿನೆಂಟ್ ಕರ್ನಲ್ ವಿಶ್ವನಾಥನ್ ತಂದೆ ವಿ.ರಾಮಕೃಷ್ಣನ್ ಧರಿಸುತ್ತಿದ್ದ ಯೂನಿಫಾರ್ಮ್ ತೋರಿಸುವಾಗ, ಅಲ್ಲಿಗೆ ಬಂದವರು, “ಅವರು ಸಾಯುವಾಗ ಧರಿಸಿದ್ದು ಇದನ್ನೇ?” ಎಂದು ಕೇಳಿದಾಗ, “ಇಲ್ಲ, ಅವನು ಸಾಯುವಾಗ ಧರಿಸಿದ್ದ ಯೂನಿಫಾರ್ಮ್ ಗುಂಡಿನಿಂದಾದ ಚಿಹ್ನೆಗಳಿಂದ ಕೂಡಿದೆ. ನೀವು ನೋಡುತ್ತಿರುವುದು ಇನ್ನೊಂದು ಜೊತೆಯ ಯೂನಿಫಾರ್ಮ್” ಎಂದು ಹೆಮ್ಮೆಯಿಂದ ನುಡಿಯುತ್ತಾರೆ.

ಕಾರ್ಗಿಲ್ ಯುಧ್ಧದಲ್ಲಿ ತಂದೆಯನ್ನು ಕಳೆದುಕೊಂಡ ಮಕ್ಕಳ, ಗಂಡಂದಿರನ್ನು ಕಳೆದುಕೊಂಡು ವಿಧವೆಯರಾದ ಹೆಂಗಸರ, ಅಣ್ಣಂದಿರನ್ನು ಕಳೆದುಕೊಂಡ ತಂಗಿಯರ, ತಾಯಂದಿರ ಇಂತಹ ಎಷ್ಟೋ ದುರ್ದೈವದ ಕತೆಗಳಿವೆ. ಆರಾಮಾಗಿ ಹವಾನಿಯಂತ್ರಿತ ಕೊಠಡಿಯಲ್ಲಿ ಇರುವ ರಾಜಕಾರಣಿಗಳಿಗೆ ಇಂತಹವರ ವೇದನೆಯೇನೆಂದು ತಿಳಿಯುವುದೇ ಇಲ್ಲ. ಪ್ರತಿಬಾರಿ ಬಾಂಬ್ ದಾಳಿ ನಡೆದಾಗಲೆಲ್ಲ ಸ್ಥಳಕ್ಕೆ ಭೇಟಿ ನೀಡಿ ಪೋಸ್ ಕೊಡುವುದಷ್ಟೇ ಆ ದರಿದ್ರ ಮುಂಡೆಮಕ್ಳಿಗೆ ಬರೋದು. ನೆನಪಿರಲಿ, ಅಮೇರಿಕದಲ್ಲಿ ಸೆಪ್ಟೆಂಬರ್ ೧೧ರ ದಾಳಿಯ ನಂತರ ಒಂದೇ ಒಂದು ಭಯೋತ್ಪಾದನಾ ದಾಳಿ ನಡೆದಿಲ್ಲ. ಆದರೆ ನಮ್ಮ ದೇಶದಲ್ಲಿ, ವರ್ಷಕ್ಕೊಂದಾದರೂ ಸ್ಫೋಟ ಆಗಲೇಬೇಕೆಂಬ ಅಲಿಖಿತ ನಿಯಮವಿದ್ದಂತೆ ಕಾಣುತ್ತದೆ. ಇದಕ್ಕೆಲ್ಲಾ ಕಾರಣ ಇಚ್ಚಾಶಕ್ತಿಯಿಲ್ಲದ ನಮ್ಮ ಸರ್ಕಾರಗಳು, ಮತ್ತು ಸರ್ಕಾರ ಏನೇ ಮಾಡಿದರೂ ತಲೆಕೆಡಿಸಿಕೊಳ್ಳದ ನಾವು ಮತ್ತು ನೀವುಗಳಲ್ಲದೇ ಬೇರೆ ಯಾರೂ ಅಲ್ಲ.

ಲಾಸ್ಟ್ ಬಿಟ್: ನಮಗಾಗಿ ಪ್ರಾಣತೆತ್ತ ವೀರಯೋಧರ ನೆನಪು ನಿಮ್ಮ ಮನದಾಳದಲ್ಲಿ ಸದಾ ಮಿನುಗುತಿರಲಿ ಎಂದು ಬಯಸುತ್ತೇನೆ.

Advertisements