Tags

, , ,

ನಾನು ಅಲ್ಲಿಗೆ ಹೋದದ್ದು  ಪ್ರಾರ್ಥನೆ ಮಾಡೋಕ್ಕಂತೂ ಅಲ್ಲ. ಹತ್ತು ಗಂಟೆಗೆ ಬರ್ತೀನಿ ಅಂತ ಹೇಳಿದ್ದ ನನ್ನ ಸ್ನೇಹಿತನೊಬ್ಬ ದೂರವಾಣಿ ಕರೆ ಮಾಡಿ ಹನ್ನೆರಡು ಗಂಟೆಗೆ ಬರ್ತೀನಿ ಅಂದ. ಆ ಎರಡು ಗಂಟೆ ಏನು ಮಾಡಲಿ ಅಂತ ಯೋಚಿಸುತ್ತಿದ್ದಾಗ ಕಂಡದ್ದು ಚರ್ಚು. ನನಗೆ ಚರ್ಚುಗಳೆಂದರೆ ಅಷ್ಟಕ್ಕಷ್ಟೇ! ಆದರೆ ಅಲ್ಲಿನ ನಿಶ್ಶಬ್ದ, ಶಾಂತ ವಾತಾವರಣ ಮಾತ್ರ ಮನಸ್ಸಿಗೆ ಮುದನೀಡುತ್ತೆ. ಆದು ನನಗೆ ತುಂಬಾ ಇಷ್ಟ. ಮೊನ್ನೆ ಹಾಗೇ  ಮೈಸೂರಿಗೆ ಹೆಸರಾದ ಸಂತ ಫಿಲೋಮೆನಾ ಚರ್ಚ್ ಒಳಗೆ ಕಾಲಿಟ್ಟ ನನಗೆ ಮೊದಲು ಕಂಡದ್ದು “No Photography”, “Switch offf your mobile phones” ಎಂಬ ಎರಡು ಗೋಡೆಬರಹಗಳು. ಮೊಬೈಲ್ ನ ಸ್ವಿಚ್ ಆಫ್ ಮಾಡೊ ಬದಲು ಸೈಲೆಂಟ್ ಮೋಡ್ ಮಾಡಿದೆ. ಆ ಎರಡು ಗಂಟೆ ಅವಧಿಯಲ್ಲಿ ಬರೆದ್ದದ್ದು ಈ ಲೇಖನ.

ಕ್ರಿಸ್ತನ ಪ್ರತಿಮೆ ನೋಡುತ್ತಾ ಕುಳಿತಿದ್ದ ನನಗೆ, ನಾನು ನಿಜವಾಗ್ಲೂ ಯಾರು, ಮತ್ತು ನನ್ನನ್ನು ನಾನು ಎಲ್ಲರ ಮುಂದೆ ಹೇಗೆ ಬಿಂಬಿಸಿಕೊಂಡ್ಡಿದ್ದೇನೆ ಅನ್ನೋ ಸಾಮಾನ್ಯ ವಿಷಯದ ಸುತ್ತವೇ ನನ್ನ ಮನಸ್ಸು ಅಲೆದಾಡಿತು. ಆತ್ಮಾವಲೋಕನ ಮಾಡುತ್ತ ಕುಳಿತ ನನಗೆ ಅಷ್ಟೇನೂ ಖುಶಿಯಾಗಲಿಲ್ಲ. ಸಮಾಜದಲ್ಲಿ ಓಳ್ಳೆಯವನು ಅನ್ನಿಸಿಕೊಳ್ಳೋ ಭರದಲ್ಲಿ ನನ್ನನ್ನು ನಾನೇ ಮರೆತು ನಟನಾಗಿದ್ದೀನಿ ಅನ್ನಿಸಿತು. ಈ ಭೂಮಿ ಮೇಲಿರೋ ಪ್ರತಿಯೊಬ್ಬರೂ ತಮ್ಮಲ್ಲಿರುವ ದುರ್ಗುಣಗಳನ್ನು ಪೋಷಿಸುತ್ತಾ, ಓಳ್ಳೆಯ ಗುಣಗಳನ್ನು ಮಾತ್ರ ಸಮಾಜಕ್ಕೆ ಪ್ರದರ್ಶಿಸುತ್ತಿದ್ದಾರೆ ಅಂತ ಅನ್ನಿಸಿದ್ದೆ ಅವಾಗ. ಎಲ್ಲರೂ ಒಳಗೊಂದು ಹೊರಗೊಂದು!!

ನಾನು ಒಳ್ಳೆಯವನಲ್ಲ!! ಎಂದು ಧೈರ್ಯದಿಂದ ಹೇಳುವ ತಾಕತ್ತು ಈ ಭೂಮಿಯ ಮೇಲಿನ ಯಾರಿಗೂ ಇಲ್ಲ. ಜನಗಳು ಮೇಲಿನ ವ್ಯಕ್ತಿತ್ವಕ್ಕೆ ಮಾರುಹೋಗುತ್ತಾರೆಯೇ ಹೊರತು ಅಂತರಂಗ ವ್ಯಕ್ತಿತ್ವಕ್ಕಲ್ಲ ಯಾಕಂದ್ರೆ ಆಂತರಿಕವಾಗಿ ಯಾರೂ ಸಾಚಾಗಳಲ್ಲ!. ಎಲ್ಲರಿಗೂ ತಮ್ಮದೇ ಆದ DARK SIDE ಅನ್ನೋದು ಇರುತ್ತೆ. ಆದನ್ನವರು ಯಾರಿಗೂ ತೋರಗೊಡುವುದಿಲ್ಲ. ಎಲ್ಲರದೂ ಒಳ್ಳೇ ಗುಣಗಳ ಪ್ರದರ್ಶನವಷ್ಟೇ!

ಯಾವತ್ತು ಒಬ್ಬ ವ್ಯಕ್ತಿಯ ನಿಜವಾದ ವ್ಯಕ್ತಿತ್ವವನ್ನು ತಿಳಿದುಕೊಳ್ಳಲು ಜನರು ಪ್ರಯತ್ನ ಮಾಡುತ್ತಾರೋ ಅವತ್ತು ಈ ಭೂಮಿ ಮೇಲೆ ಪ್ರೀತಿ ಮಾಯವಾಗುತ್ತೆ. ಆದರೆ, ಒಬ್ಬ ವ್ಯಕ್ತಿ ತನ್ನನ್ನು ತಾನು ಹೇಗೆ ಬಿಂಬಿಸಿಕೊಳ್ತಾ ಇದಾನೋ ಅದರಲ್ಲೇ ತೃಪ್ತಿ ಕಾಣುತ್ತಿರುವ ಜನರು ಆ ವ್ಯಕ್ತಿಯ ನಿಜವಾದ ವ್ಯಕ್ತಿತ್ವವನ್ನು ತಿಳಿದುಕೊಳ್ಳಲು ಪ್ರಯತ್ನವನ್ನೇ ಮಾಡುವುದಿಲ್ಲ ಯಾಕೆಂದರೆ ಅವರು ಮಾಡುತ್ತಿರುವುದು ಅದನ್ನೇ ಅಲ್ವಾ.!!!!!!!!

ಲಾಸ್ಟ್ ಬಿಟ್: ಒಬ್ಬ ವ್ಯಕ್ತಿಯ ವ್ಯಕ್ತಿತ್ವ ಫೇಸ್ ಬುಕ್ ಪ್ರೊಫೈಲ್ ಪಿಕ್ ಇದ್ದಂತೆ. ತೆಗೆಯೋ ಹತ್ತು ಫೋಟೊಗಳಲ್ಲಿ ಒಂದು ಚೆನ್ನಾಗಿರುವುದನ್ನು ಮಾತ್ರ ತೋರಿಸ್ತಾರೆ. ಉಳಿದ ಒಂಭತ್ತು ಚಿತ್ರಗಳು ಅವರಲ್ಲೇ ಇರುತ್ತವೆ!